ಮಲ್ಲಿಷೇಣ
ಕ್ರಿ.ಶ.ಸು. 11-12ನೆಯ ಶತಮಾನ. ಸಂಸ್ಕøತದಲ್ಲಿ ಹಲವು ಕೃತಿಗಳನ್ನು ರಚಿಸಿದ ಕವಿ. ಗಂಗದೊರೆ ಮಾರಸಿಂಹನ ಮಂತ್ರಿ ಚಾವುಂಡರಾಯನ ಗುರು. ಆಜಿತಸೇನ ಭಟ್ಟಾರಕರ ಶಿಷ್ಯ ಪರಂಪರೆಯಲ್ಲಿ ಬಂದವ. ಈತ ಆಗಮ, ಲಕ್ಷಣ, ತರ್ಕ, ಗರುಡಮಂತ್ರ ಮುಂತಾಗಿ ಅನೇಕ ವಿಷಯಗಳಲ್ಲಿ ಪಾರಂಗತನಾಗಿದ್ದ. ಧಾರವಾಡ ಜಿಲ್ಲೆಯ ಗದಗ ತಾಲ್ಲೂಕಿನ ಮುಳಗುಂದದಲ್ಲಿ ಮಹಾಪುರಾಣವನ್ನು ಬರೆದು ಮುಗಿಸಿದುದಾಗಿ ತಿಳಿಸಿದ್ದಾನೆ. ಇದು ತ್ರಿಷಿಷ್ಠ ಶಲಕಾಪುರುಷರ ಕುರಿತ ಪುರಾಣ ಜೀನಸೇನ ಹಾಗೂ ಗುಣ ಭದ್ರರ ರೀತಿಯಲ್ಲೆ ಬರೆಯಲ್ಪಟ್ಟಿದೆ. ಕೊಲ್ಹಾಪುರದ ಲಕ್ಷ್ಮಿಸೇನಾ ಭಟ್ಟಾರಕ ಮಠದಲ್ಲಿ ಕನ್ನಡ ಲಿಪಿಯಲ್ಲಿ ಬರೆದ ಇದರ ಹಸ್ತಪ್ರತಿಯೊಂದಿದೆ. ಇದಲ್ಲದೆ ಈತ ನಾಗಕುಮಾರ ಕಾವ್ಯ: ಭೈರವ ಪದ್ಮಾವತಿ ಕಲ್ಪ; ಸರಸ್ವತೀ ಮಂತ್ರ ಕಲ್ಪ; ಜ್ವಾಲನೀ ಕಲ್ಪ; ಕಾಮಚಾಂಡಾಲೀ ಕಲ್ಪ ಎಂಬ ಗ್ರಂಥಗಳನ್ನು ಬರೆದುದಾಗಿ ತಿಳಿದುಬರುತ್ತದೆ. ಮಲ್ಲಿಷೇಣ ಹೆಸರಿನ ವ್ಯಕ್ತಿಗಳು ಬಹಳ ಜನರಿದ್ದಾರೆ. ಗ್ರಂಥಸೂಚಿಗಳಲ್ಲಿ ಪ್ರವಚನ ಕಾಯಟೀಕಾ, ವಜ್ರಪಂಜರ ವಿಧಾನ ಬ್ರಹ್ಮವಿದ್ಯೆ ಮುಂತಾಗಿ ಕೆಲವು ಕೃತಿಗಳು ಮಲ್ಲಿಷೇಣ ಕೃತವೆಂದು ತಿಳಿದು ಬರುತ್ತದೆ. ಆದರೆ ಇವುಗಳ ಬಗ್ಗೆ ಸತ್ಯಾಂಶ ಎಷ್ಟು ಎಂದು ಹೇಳಲು ಬರುವುದಿಲ್ಲ.  		
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ